ಮಾಸಿದ ಜನತೆಯ ತೊಳೆಯುತ್ತ ಸನ್ಮಾರ್ಗ
ತೋರಲು ಬರುವಂಥ ಬೆಳಕು ಸಂತರು
ಬಾಳನು ಬೆಳಗುವ ಬೆಳಕು
ಬಸವ ಬುದ್ಧರಂತೆ ರಾಮಕೃಷ್ಣರಂತೆ
ಸರ್ವಜ್ಞನೀ ಹುಟ್ಟಿ ಬಂದೆ ಮಲಗಿದ್ದ
ನಾಡವರನೆಬ್ಬಿಸ ಬಂದೆ
ತುಂಡುಗಂಬಳಿ ಹೊದ್ದು ಕರದಿ ಕಪ್ಪರ ಹಿಡಿದು
ವೀರಕೇಸರಿಯಂತೆ ತಿರುಗಿ ಲೋಕದ
ಡೊಂಕುಗಳ ತಿದ್ದುತ ಮರುಗಿ
ಜನಪದ ಚಕ್ರವರ್ತಿಯೆ ನಿನ್ನ ಬಾಯಲಿ
ಅನುಭವ ಹಾಡಾಗಿ ಬಂತು ತ್ರಿಪದಿಯ
ಸತ್ವದ ತುದಿಯೇರಿ ನಿಂತು
ಭ್ರಷ್ಟರ ನಾಚಿಸಿ ನೀಚರ ಹೇಸಿಸಿ
ಶಿಷ್ಟರ ಮಾಡಲು ದುಡಿದೇ ಜನರನು
ಹೆಜ್ಜೆ ಹೆಜ್ಜೆಗೆ ತಿದ್ದಿ ನಡೆದೆ
ಕನ್ನಡ ಕಣ್ಮಣಿ ಕನ್ನಡ ಶಕ್ತಿಯ
ಚೆನ್ನಾಗಿ ವಿಶ್ವಕ್ಕೆ ತೋರಿ ಸಾರಿದೆ
ಮಾನವರೊಂದೆಂದು ತೋರಿ
ಹಿಂದಿಲ್ಲ ಮುಂದಿಲ್ಲ ಗೊಂದಲವಾಗಿದೆ
ಇಂದಿನ ಪರಿಸರ ತಂದೆ ಸರ್ವಜ್ಞ
ನೀ ಬರಬಾರದೆ ಇಂದೆ
*****